ಹಾಫ್‌ಮ್ಯಾರಥಾನ್‌: ಮ್ಯಾಥ್ಯೂ-ಕವಿತಾ ಚಾಂಪಿಯನ್‌

ಮೈಸೂರು, ಅ.೩-ಓಟದ ಕೌಶಲ್ಯ ಮೆರೆದ ಕೇರಳದ ಸೊಜಿ ಮ್ಯಾಥ್ಯೂ ಹಾಗೂ ಮಹಾರಾಷ್ಟ್ರದ ಕವಿತಾ ರಾಮತ್‌ ಮೈಸೂರು ದಸರಾ (೨೧.೧ ಕಿ.ಮೀ ಓಟ) ಹಾಫ್‌ ಮ್ಯಾರಥಾನ್‌ ಓಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ಮೈಸೂರಿನ ಅರಮನೆ ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ಲೈಫ್‌ ಈಸ್‌ ಕಾಲಿಂಗ್‌ ಸ್ಪೋರ್ಟ್ಸ್‌ ಸಂಸ್ಥೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ದಸರಾ ಕ್ರೀಡಾ ಉಪಸಮಿತಿ ಸಂಯುಕ್ತಾಶ್ರಯದಲ್ಲಿ ಆಯೊಜಿಸಿದ್ದ ಪುರುಷರ ವಿಭಾಗದ ೨೧.೧ ಕಿಲೋ ಮೀಟರ್‌ ಓಟದ ಸ್ಪರ್ಧೆಯಲ್ಲಿ ಓಟದ ಸ್ಥಿರತೆ ಪ್ರದರ್ಶಿಸಿದ ಮ್ಯಾಥ್ಯೂ ೧:೦೯.೦೩ ಸೆ.ನಲ್ಲಿ ಓಟವನ್ನು ಪೂರೈಸಿ ವೊದಲ ಸ್ಥಾನ ಪಡೆದುಕೊಂಡರೆ, ಉತ್ತರ ಪ್ರದೇಶದ ಜಾರ್ಖಾಂಡ್‌ನ ಅರವಿಂದ ಕುಮಾರ್‌ ಯಾದವ್‌ (೧:೧೦.೪೭ ಸೆ.) ಹಾಗೂ ಉತ್ತರಾಖಂಡದ ಮುಖೇಶ್‌ ರಾವತ್‌(೧:೧೧.೪೫ ಸೆ.) ಕೆಲ ಸೆಕೆಂಡ್‌ಗಳ ಅಂತರದಲ್ಲಿ ಗುರಿ ಮುಟ್ಟಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು. ಹಾಗೆಯೆು ೧೦ ಕಿ.ಮೀ ಓಟದಲ್ಲಿ ಕರ್ನಾಟಕದ ಓಟಗಾರರು ಉತ್ತಮ ಪ್ರದರ್ಶನ ದೊಂದಿಗೆ ವೊದಲ ೩ ಸ್ಥಾನವನ್ನು ಗೆದ್ದುಕೊಂಡಿದ್ದು ಗಮನಾರ್ಹವಾಗಿತ್ತು. ಫೋಟೋ ಫಿನಿಷ್‌ ಪೈಪೋಟಿಯಲ್ಲಿ ರಂಜನ್‌ ಕಾರಿಯಪ್ಪ (೩೨.೪೫ ಸೆ.) ತಮ್ಮ ಸಮೀಪಸ್ಪರ್ಧಿ ಕೃಷ್ಣಪ್ಪ (೩೨.೫೦ ಸೆ.) ಅವರನ್ನು ಕೇವಲ ೫ ಮೈಕ್ರೋ ಸೆಕೆಂಡ್‌ಗಳ ಅಂತರದಲ್ಲಿ ಹಿಂದಿಕ್ಕಿ ವೊದಲಿಗರಾದರು. ಎಂ.ಟಿ.ಬಸವರಾಜ್‌ (೩೨.೫೭ ಸೆ.)ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು. ಕವಿತಾಗೆ ಪ್ರಶಸ್ತಿ: ಮಹಿಳಾ ವಿಭಾಗದ ಹಾಫ್‌ ಮ್ಯಾರಥಾನ್‌ ಓಟದಲ್ಲಿ ಮಹಾರಾಷ್ಟ್ರದ ಕವಿತಾ ರಾಮತ್‌ (೧:೨೦.೩೬ ಸೆ.) ವೃತ್ತಿಪರತೆ ಪ್ರದರ್ಶಿಸಿ ಪ್ರಥಮ ಸ್ಥಾನದ ಪಾರಮ್ಯ ಪ್ರದರ್ಶಿಸಿದರೆ, ಆಗ್ನೇಯ ರೈಲ್ವೆಯ ಕಿರಣ್‌ ತಿವಾರಿ (೧:೨೦.೫೬ ಸೆ.) ಹಾಗೂ ಮುಂಬೈನ ಲಲಿತಾ ಬಾಬರ್‌ (೧:೨೧.೫೦ ಸೆ.) ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ದೂಡಲ್ಪಟ್ಟರು. ತಿಪ್ಪವ್ವಗೆ ಎರಡನೇ ಸ್ಥಾನ: ೧೦ ಕಿಲೋಮೀಟರ್‌ ಓಟದಲ್ಲಿ ಮೈಸೂರಿನ ನೈರುತ್ಯ ರೈಲ್ವೆಯ ತಿಪ್ಪವ್ವ ಸಣ್ಣಕ್ಕಿ (೪೦.೧೫ ಸೆ.) ಜಾರ್ಖಂಡನ ಜಮುನಾ ಖಾತೂನ್‌ (೩೯.೫೩ ಸೆ.) ಅವರಿಗಿಂತ ಹಿಂದೆ ಬಿದ್ದು ಎರಡನೇ ಸ್ಥಾನಕ್ಕೆ ನೂಕಲ್ಪಟ್ಟರು. ಕರ್ನಾಟಕದ ಕೆ.ಎನ್‌.ಅಶ್ವಿನಿ (೪೮.೫೩ ಸೆ.) ಮೂರನೇಯವರಾಗಿ ಗುರಿಮುಟ್ಟಿದರು. ನಗದು ಬಹುಮಾನ: ಹಾಫ್‌ಮ್ಯಾರಥಾನ್‌ ಓಟದ ಪುರುಷ ಮತ್ತು ಮಹಿಳಾ ವಿಜೇತರು ಕ್ರಮವಾಗಿ ೩೦, ೨೫ ಹಾಗೂ ೧೫ ಸಾವಿರ ರೂ. ನಗದು ಹಾಗೂ ೧೦ ಕಿ.ಮೀ ಓಟದ ಪುರುಷ ಮತ್ತು ಮಹಿಳಾ ವಿಜೇತರು ೧೫, ೧೦ ಹಾಗೂ ೫ ಸಾವಿರ ರೂ.ಗಳ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರವನ್ನು ಪಡೆದುಕೊಂಡರು. ಚಾಲನೆ: ಇದಕ್ಕೂ ಮುನ್ನ ಇದೇ ವೊದಲ ಬಾರಿಗೆ ಆಯೊಜಿಸಿದ್ದ ಸೆಲ ಭ್ರೇಷನ್‌ ಹಾಫ್‌ ಮ್ಯಾರಥಾನ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ. ರಾಮ ದಾಸ್‌, ಬಹುಭಾಷಾ ನಟಿ ಹಾಗೂ ಓಟದ ರಾಯಭಾರಿ ನಿಧಿ ಸುಬ್ಬಯ್ಯ ಹಾಗೂ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್‌ ಶ್ರೀನಾಥ್‌ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಸ್ವಲ್ಪ ದೂರ ಓಡಿ ಸ್ಪರ್ಧಿಗಳಿಗೆ ಸ್ಪೂರ್ತಿ ನೀಡಿದರು. ಅವರೊಂದಿಗೆ ಮೇಯರ್‌ ಪುಪ್ಷಲತಾ, ಉಪ ಮೇಯರ್‌ ರವಿಕುಮಾರ್‌, ದಸರಾ ಕ್ರೀಡಾ ಉಪಸಮಿತಿಯ ಅಧ್ಯಕ್ಷ ದಾಸಯ್ಯ, ಉಪಾಧ್ಯಕ್ಷ ಸತ್ಯಪ್ರಕಾಶ್‌, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌ ಹೆಜ್ಜೆ ಹಾಕಿದರು. ಹಾಫ್‌ ಮ್ಯಾರಥಾನ್‌ ಓಟಮ ಜಯಮಾರ್ತಂಡ ದ್ವಾರದ ಮುಂಭಾಗದಿಂದ ಹುಣಸೂರು ರಸ್ತೆ, ಎಸ್‌ಜೆಸಿಇ ರಸ್ತೆ, ವಾಕ್‌ ಮತ್ತು ಶ್ರವಣ ಸಂಸ್ಥೆ, ಮಾನಸ ಗಂಗೋತ್ರಿ ಮೂಲಕ ಪಡುವಾರಹಳ್ಳಿ ಬಳಿ (ಯು ಟರ್ನ್‌) ಮತ್ತೇ ಹುಣಸೂರು ರಸ್ತೆಗೆ ತಿರುಗಿ ಹುಣಸೂರು ರಸ್ತೆ, ಜೆಎಲ್‌ಬಿ ರಸ್ತೆ, ರಮಾವಿಲಾಸ ರಸ್ತೆ, ಮೈಸೂರ ನಗರ ಪಾಲಿಕೆ, ಅರಮನೆ ಮುಂಭಾಗದಿಂದ ಜಯಮಾರ್ತಂಡ ದ್ವಾರದ ಬಳಿ ಮುಕ್ತಾಯಗೊಂಡಿತು. ಓಟ ಪೂರೈಸಿದ ಸ್ಪರ್ಧಿಗಳಿಗೆ ಸಮಧಾನಕರ ಪದಕ ಕೊರಳಿಗೆ ಹಾಕಲಾಯಿತು. ಸೆಲೆಬ್ರೆಷನ್‌ ಹಾಫ್‌ ಮ್ಯಾರಥಾನ್‌ ೨೧.೧ ಕಿ.ಮೀ, ೧೦ ಕಿ.ಮೀ ಸ್ಪರ್ಧಾ ಓಟವಾಗಿದ್ದರೆ, ೫ ಕಿ.ಮೀ. ಓಟವನ್ನು ಆರೋಗ್ಯ ಹಾಗೂ ಮನರಂಜನ ದೃಷ್ಟಿಯಿಂದ ಆಯೊಜಿಸಲಾಗಿತ್ತು. ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್‌ ಸೇರಿದಂತೆ ವಿವಿಧೆಡೆಗಳಿಂದ ೧೬೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ೫ ಕಿ.ಮೀಟರ್‌ ಓಟದಲ್ಲಿ ೧೫ ವರ್ಷ ಮೇಲ್ಪಟ್ಟವರು ಪಾಲ್ಗೊಂಡು ಮ್ಯಾರಥಾನ್‌ ಓಟಕ್ಕೆ ವಿಶೇಷ ಮೆರಗು ನೀಡಿದರು. ಅಲ್ಲದೇ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ಪತ್ನಿ ಮಾಧವಿ ಹಾಗೂ ಪುತ್ರ, ಟಿವಿ ನಿರೂಪಕ ವಿನಾಯಕ್‌ಜೋಷಿ ೧೦ ಕಿಲೋ ಮೀಟರ್‌ ಓಟದಲ್ಲಿ ಪಾಲ್ಗೊಂಡು ಓಟವನ್ನು ಪೂರೈಸಿದ್ದು ವಿಶೇಷವಾಗಿತ್ತು.

No Comments to “ಹಾಫ್‌ಮ್ಯಾರಥಾನ್‌: ಮ್ಯಾಥ್ಯೂ-ಕವಿತಾ ಚಾಂಪಿಯನ್‌”

add a comment.

Leave a Reply

You must be logged in to post a comment.